ಜಯಕರ್ ಮುಕುಂದ ರಾಮರಾವ್
	1873-1959. ಭಾರತೀಯ ವಿದ್ವಾಂಸ, ಶಿಕ್ಷಣತಜ್ಞ, ನ್ಯಾಯವಾದಿ, ರಾಜಕಾರಣಿ ಮತ್ತು ಕಲಾಭಿಮಾನಿ, 1873ರ ನವೆಂಬರ್ 13ರಂದು ಮುಂಬಯಿಯಲ್ಲಿ ಜನನ. ತಂದೆ ರಾಮರವ್ ತಾಯಿ ಸೋನಾಬಾಯಿ ಬಾಲ್ಯದಲ್ಲೇ ತಂದೆಯ ಮರಣದಿಂದ ತಾತನ ಪೋಷಣೆಗೆ ಒಳಗಾದರು. ತಾತ ವಾಸುದೇವ ಜಗನ್ನಾಥ ಕೀರ್ತಿಕರ್ ಪಂಡಿತರು. ತತ್ವಜ್ಞರು ಮತ್ತು ನ್ಯಾಯವಾದಿಗಳು. ಇವರು ಮೊಮ್ಮಗನ ಮೇಲೆ ಅಪಾರ ಪ್ರಭಾವ ಬೀರಿದರು. ಜಯಕರ್ 1899ರಲ್ಲಿ ಸುಶೀಲಾಬಾಯಿಯನ್ನು ವಿವಾಹವಾದರು.

	ಜಯಕರ್ ಮುಂಬಯಿಯ ಎಲ್ಫಿನ್‍ಸ್ಟನ್ ಪ್ರೌಢಶಾಲೆ ಮತ್ತು ಸೇಂಟ್ ಸೇóವಿಯರ್ ಕಾಲೇಜಿನಲ್ಲಿ ಓದಿ 1895 ರಲ್ಲಿ ಪದವೀಧರರಾದರು. 1897ರಲ್ಲಿ ಎಂ.ಎ. ಯನ್ನೂ 1902ರಲ್ಲಿ ಎಲ್.ಎಲ್.ಬಿ. ಯನ್ನೂ ಗಳಿಸಿ, 1903ರಲ್ಲಿ ಇಂಗ್ಲೆಂಡಿಗೆ ಹೋಗಿ 1905ರಲ್ಲಿ ಬಾರ್-ಅಟ್-ಲಾ ಆದರು. ಅದೇ ವರ್ಷ ಭಾರತಕ್ಕೆ ಹಿಂದಿರುಗಿ ಮುಂಬಯಿಯ ಉಚ್ಚ ನ್ಯಾಯಾಲಯದಲ್ಲಿ ವಕೀಲಿಯನ್ನಾರಂಭಿಸಿದರು. 1907ರಲ್ಲಿ ಮುಂಬಯಿ ನ್ಯಾಯಶಾಸ್ತ್ರಶಾಲೆಯಲ್ಲಿ ಪ್ರಾಧ್ಯಪಕರಾಗಿ ನೇಮಿತರಾದರು. ಆದರೆ ಇವರಿಗಿಂತ ಕಿರಿಯನಾಗಿದ್ದ ಇಂಗ್ಲಿಷನೊಬ್ಬನನ್ನು ಪ್ರಿನ್ಸಿಪಾಲನಾಗಿ ನೇಮಕ ಮಾಡಿದ್ದರಿಂದ ಇವರು ತಮ್ಮ ಕೆಲಸಕ್ಕೆ ರಾಜಿನಾಮೆ ಇತ್ತರು. 1937ರಲ್ಲಿ ಇವರು ಫೆಡರಲ್ ನ್ಯಾಯಾಲಯದ ನ್ಯಾಯಮೂರ್ತಿಯಾದರು. ಅನಂತರ ಲಂಡನಿನ ಪ್ರಿವಿ ಕೌನ್ಸಿಲಿನ ನ್ಯಾಯ ಸಮಿತಿಯ ಸದಸ್ಯರಾದರು. 1942ರಲ್ಲಿ ಆ ಹುದ್ದೆಗೆ ರಾಜೀನಾಮೆ ನೀಡಿದರು.

	ಜಯಕರರು ಆರ್ಯನ್ ಎಜುಕೇಷನ್ ಸೊಸೈಟಿ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರ ಆಶ್ರಯದಲ್ಲಿ ಉನ್ನತ ಪ್ರೌಢಶಾಲೆಯೊಂದನ್ನು ಪ್ರಾರಂಭಿಸಿದರು. ತಾವೇ ಅದರ ಪ್ರಿನ್ಸಿಪಾಲರಾಗಿ ಕೆಲಸಮಾಡಿದರು. ಜಯಕರರು ಸಂಸ್ಕøತ ಪಂಡಿತರು. ಇವರ ಬರೆಹ ಹಿಂದೂ ಧರ್ಮಶಾಸ್ತ್ರಕ್ಕೆ ಒಂದು ಉತ್ತಮ ಕೊಡುಗೆ. ತಮ್ಮ ತಾತ ರಚಿಸಿದ ಸ್ಟಡೀಸ್ ಇನ್ ವೇದಾಂತ ಗ್ರಂಥವನ್ನು 1924ರಲ್ಲಿ ಇವರು ಸಂಪಾದಿಸಿ ಪ್ರಕಟಿಸಿದರು. ತಮ್ಮ ತಾತನ ನೆನಪಾಗಿ ಇವರು ಮುಂಬಯಿ ಉಚ್ಚ ನ್ಯಾಯಾಲಯದ ವಕೀಲ ಸಂಘಕ್ಕೆ ತಮ್ಮ ಅಮೂಲ್ಯ ಗ್ರಂಥಗಳನ್ನು ದಾನ ಮಾಡಿದರಲ್ಲದೆ ಅವುಗಳ ನಿರ್ವಹಣೆಗಾಗಿ ಹಣದ ವ್ಯವಸ್ಥೆಯನ್ನೂ ಮಾಡಿದರು.

	ಜಯಕರರಿಗೆ ಕಲೆ ಸಂಗೀತಗಳಲ್ಲಿ ವಿಶೇಷ ಅಭಿಮಾನವಿತ್ತು. ಇವರು ಶಾಸ್ತ್ರೀಯ ಸಂಗೀತವನ್ನೂ ಕಲೆಯನ್ನೂ ಬಾಲ್ಯದಲ್ಲಿ ಅಭ್ಯಾಸ ಮಾಡಿದ್ದರು. ಗಂಧರ್ವ ಮಹಾವಿದ್ಯಾಲಯ ಸಂಗೀತ ಸಭೆಯ ಆಶ್ರಯದಲ್ಲಿ ಸೆರಿದ್ದ ಸಮ್ಮೇಳನದ ಅಧ್ಯಕ್ಷಸ್ಥಾನದಿಂದ ಇವರು ಮಾಡಿದ ಭಾಷಣ ಆಧುನಿಕ ಸಂಗೀತಕ್ಕೆ ಉತ್ತಮ ಕೊಡುಗೆ. 1918ರಲ್ಲಿ ಇವರು ನಾಟಕ ಸಮ್ಮೇಳನದ ಅಧ್ಯಕ್ಷರಾಗಿಯೂ 1937-38ರಲ್ಲಿ ಮಹಾರಾಷ್ಟ್ರ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿಯೂ ಕೆಲಸಮಾಡಿದರು. ಭಂಡಾರ್‍ಕರ್ ಪ್ರಾಚ್ಯವಸ್ತು ಸಂಶೋಧನಾಲಯ ಮಹಾಭಾರತವನ್ನು ಸಂಪಾದಿಸಿ ಪ್ರಕಟಿಸಲು ಧನಸಹಾಯ ಮಾಡಿಸಿ,-ತಾವೂ ಉದಾರವಾಗಿ ಧನ ನೀಡಿದರು.

	ಜಯಕರರಿಗೆ ಸಮಾಜಸುಧಾರಣೆಯಲ್ಲೂ ಆಸಕ್ತಿಯಿತ್ತು. ಇವರು 1917ರಲ್ಲಿ ನಾಸಿಕದಲ್ಲಿ ಜರುಗಿದ ಸಾಮಾಜಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1918ರಲ್ಲಿ ಪುಣೆ ಜಿಲ್ಲಾ ಸಮ್ಮೇಳನದಲ್ಲಿ ಇವರು ಮಾಡಿದ ಭಾಷಣವನ್ನು ಲೋಕಮಾನ್ಯ ತಿಲಕರು ಮೆಚ್ಚಿಕೊಂಡಿದ್ದರು. 1917ರಲ್ಲಿ ಕಲ್ಕತ್ತದಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಇವರು ಸ್ವರಾಜ್ಯ ಕುರಿತು ಮಾಡಿದ ಭಾóóಷಣ ತುಂಬ ಪ್ರಭಾವಕಾರಿಯಾಗಿತ್ತು. ಇವರು 1918ರಲ್ಲಿ ಮುಂಬಯಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಮಾಡಿದ ಭಾಷಣವೂ ಪ್ರಸಿದ್ಧವಾಗಿದೆ. 1925ರ ಕಾನ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಇವರು ಪ್ರತಿಯೋಗಿ ಸಹಕಾರ ಮತ್ತು ಬಂಗಾಳ ರಾಜಕೀಯ ನಾಯಕರ ಬಂಧನ ಕುರಿತು ಮಾತನಾಡಿದರು. ತಿಲಕರ ಸ್ವರಾಜ್ಯನಿಧಿಗೆ ಇವರು 25,000ರೂ. ದಾನಮಾಡಿದರು.

	1923-26ರಲ್ಲಿ ಮುಂಬಯಿಯ ಶಾಸನ ಸಭೆಯಲ್ಲಿ ಸ್ವರಾಜ್ಯ ಪಕ್ಷದ ನಾಯಕರಾಗಿ ಇವರು ಮಾಡಿದ ಭಾಷಣಗಳು ಎಲ್ಲರ ಮೆಚ್ಚುಗೆ ಸಂಪಾದಿಸಿದವು. ಇವರು 1926ರಲ್ಲಿ ಕೇಂದ್ರ ಶಾಸನ ಸಭೆಗೆ ಆಯ್ಕೆಯಾಗಿ ನ್ಯಾಷನಲಿಸ್ಟ್ ಪಕ್ಷದ ಉಪನಾಯಕರಾಗಿ ಕೆಲಸಮಾಡಿದರು.

	ಜಯಕರರು ರಾಜಕೀಯ ಮುತ್ಸದ್ಧಿಯಾಗಿಯೂ ಇದ್ದರು. ಭಾರತೀಯ ನಾಯಕರ ಮತ್ತು ಬ್ರಿಟಿಷ್ ಸರ್ಕಾರದ ನಡುವೆ ಇವರು ಅನೇಕ ಭಾರಿ ಸಂದಾನ ಏರ್ಪಡಿಸಿ ಪರಸ್ಪರ ಅರಿವಿಗೆ ಸಹಾಯ ಮಾಡಿದರು. ಗಾಂಧಿ-ಅರ್ವಿನ್ ಒಪ್ಪಂದ ಇವರ ಮತ್ತು ಸಪ್ರು ಅವರ ಪ್ರಯತ್ನದ ಫಲವೆನ್ನಬಹುದು. ಗಾಂಧಿಯವರು ತಮ್ಮ ಉಪವಾಸವನ್ನು ತ್ಯಜಿಸುವಂತೆ ಮಾಡಿದ ಪುಣೆ ಒಪ್ಪಂದವೂ ಜಯಕರರ ಪ್ರಯತ್ನದ ಫಲ. ಇವರು ಲಂಡನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ಮೂರುಬಾರಿ ಭಾರತವನ್ನು ಪ್ರತಿನಿಧಿಸಿದ್ದರು.

	ಜಯಕರರು ಭಾರತದ ಎಲ್ಲ ಪಕ್ಷಗಳ ಜನರ ವಿಶ್ವಾಸ ಗೌರವಗಳಿಗೆ ಪಾತ್ರರಾಗಿದ್ದರು. ಬ್ರಿಟಿಷ್ ಸರ್ಕಾರ ನೀಡಿದ ಕೆ.ಸಿ.ಎಸ್.ಐ. ಬಿರುದನ್ನೂ ಉನ್ನತ ವೇತನದ ಹುದ್ದೆಗಳನ್ನೂ ತಿರಸ್ಕರಿಸಿದರು. ಸಾಮಾಜಿಕ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಇವರು ರೂ. 2,00,000 ವರೆಗೆ ದಾನ ಮಾಡಿದರು. ಕೈಗಾರಿಕೆಯಲ್ಲಿ ಭಾರತ ಮುಂದುವರಿಯಬೇಕೆಂಬುದು ಇವರ ಅಭಿಲಾಷೆಯಾಗಿತ್ತು. ಭಾರತದ ವಾಣಿಜ್ಯ ಮತ್ತು ಕೈಗಾರಿಕಾಭಿವೃದ್ಧಿಯಾಗಬೇಕೆಂದು ದುಂಡು ಮೇಜಿನ ಪರಿಷತ್ತಿನಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಇವರು ಮನವಿ ಮಾಡಿದರು.

	ಜಯಕರರನ್ನು 1942-43ರಲ್ಲಿ ಮುಂಬಯಿ ಸರ್ಕಾರ ಮಹಾರಾಷ್ಟ್ರ ವಿಶ್ವವಿದ್ಯಾಲಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕಮಾಡಿತು. ಅನಂತರ ಸ್ಥಾಪಿತವಾದ ಪುಣೆ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ಇವರು ನೇಮಕವಾಗಿ, 1948-1956ರಲ್ಲಿ ಆ ವಿಶ್ವವಿದ್ಯಾಲಯ ಅಭಿವೃದ್ಧಿಗಾಗಿ ದುಡಿದರು. ಇವರು ನಾಗಪುರ, ಲಖನೌ, ಪಾಟ್ನಾ ಮತ್ತು ಅಣ್ಣಾಮಲೈ ವಿಶ್ವವಿದ್ಯಾಲಯಗಳ ಘಟಿಕೋತ್ಸವಗಳಲ್ಲಿ ಮಾಡಿದ ಭಷಣಗಳು ಇವರ ವಿದ್ವತ್ತಿನ ದ್ಯೋತಕಗಳು.

	ಜಯಕರರು 1959ರ ಮಾರ್ಚ್ 10ರಂದು ಮುಂಬಯಿಯಲ್ಲಿ ತೀರಿಕೊಂಡರು. ಇವರು ಇಂಗ್ಲೆಂಡಿಗೆ ಅನೇಕ ಸಾರಿ ಭೇಟಿ ಕೊಟ್ಟಿದ್ದರೂ ಹಿಂದೂ ಸಂಪ್ರದಾಯಗಳನ್ನೂ ಆಚರಣೆಗಳನ್ನೂ ಬಿಟ್ಟಿರಲಿಲ್ಲ.                         (ಎಂ.ಎಸ್.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ